ರಾಯಚೂರು,ಸೆ.೫:ಖಾಸಗಿ ಶಾಲಾ ಬಸ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂರು ಮಕ್ಕಳ ಕಾಲು ತುಂಡಾಗಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಶಾಲಾ ವಾಹನ ಚಾಲಕನ ಎರಡೂ ಕಾಲುಗಳು ತುಂಡಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ.

ಉಳಿದಂತೆ ೧೭ ಮಕ್ಕಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಗಳನ್ನು ಕುರಡಿ ಗ್ರಾ.ಪಂ ಸದಸ್ಯ ಮಾರೆಪ್ಪ ಅವರ ಪುತ್ರ ಶ್ರೀಕಾಂತ್ ಹಾಗೂ ಕುರುಡಿ ಗ್ರಾಮದ ಅಮರೇಶ್ವರ್ ಎಂಬುವರ ಪುತ್ರ ಸಮರ್ಥ್ ಎಂದು ಗುರುತಿಸಲಾಗಿದೆ.
ಒಟ್ಟು ಈ ಶಾಲೆ ಬಸ್‌ನಲ್ಲಿ ೪೦ ಜನ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯಲಾಯಿತು,. ಈ ಮಕ್ಕಳು ಕುರುಡಿ ಹಾಗೂ ಆಸುಪಾಸಿನ ಗ್ರಾಮದ ಮಕ್ಕಳು ಎನ್ನಲಾಗಿದೆ. ೧೭ ಮಕ್ಕಳಿಗೆತೀವ್ರ ಸ್ವರೂಪದ ಗಾಯಗಳಾಗಿದ್ದು, ಉಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಗೊಂಡ ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲು ತುಂಡಾಗಿದ್ದ ಮೂವರು ಮಕ್ಕಳಲ್ಲಿ ೨ ಮಕ್ಕಳು ಸಾವನ್ನಪ್ಪಿದ್ದು, ಉಳಿದ ಒಂದು ಮಗು ಸಾವು-ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಈ ಮಗುವಿಗೆ ತುರ್ತು ನಿಗಾ ಘಟಕದಲ್ಲಿ ರಿಮ್ಸ್ ವೈದ್ಯರು ಶಸ್ತ್ರ ಚಿಕಿತ್ಸೆ ಕೈಗೊಂಡಿದ್ದಾರೆ ಎನ್ನಲಾಗಿದೆ.
.jpeg)
ಶಾಲಾ ವಾಹನ ಚಾಲಕನ ಎರಡೂ ಕಾಲುಗಳು ತುಂಡಾಗಿದ್ದು, ತಕ್ಷಣ ಸಾರ್ವಜನಿಕರು ಚಾಲಕನನ್ನು ಮಾನವಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಳಿದ ಮಕ್ಕಳಿಗೆ ಕೈ-ಕಾಲು, ಮುಖ, ಬೆನ್ನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಆ ಮಕ್ಕಳ್ಳನ್ನೂ ಮಾನವಿಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ ಮಕ್ಕಳಿಗೆ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ.
ಜಿಲ್ಲೆಯ ಮಾನವಿ ತಾಲ್ಲೂಕಿನ ಕಪ್ಪಗಲ್ ಬಳಿ ಇಂದು ಬೆಳಿಗ್ಗೆ ಸುಮಾರು ೯.೩೦ರ ವೇಳೆಗೆ ಈ ಅವಘಡ ಸಂಭವಿಸಿದೆ.
ರಾಯಚೂರಿಗೆ ತೆರಳುತ್ತಿದ್ದ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಸಂಖ್ಯೆ-ಕೆಎ೩೬ ಎಫ್೧೪೯೦ ಹಾಗೂ ಪಟ್ಟಣದ ಖಾಸಗಿ ಲೊಯಲಾ ಶಾಲೆಯ ಮಕ್ಕಳನ್ನು ಕರೆದೊಯ್ಯುತ್ತಿದ ಬಸ್ (ಕೆ೩೬ಎ-೭೪೬೨) ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.
ಈಶಾನ್ಯ ಸಾರಿಗೆ ಸಂಸ್ಥೆಯ ರಾಯಚೂರು ಡಿಪೋಗೆ ಸೇರಿದ ಈ ಬಸ್‌ನ ಚಾಲಕ ಮದ್ಯ ಸೇವಿಸಿದ್ದ ಎಂದು ಕೆಲ ಪ್ರಯಾಣಿಕರು ಆರೋಪಿಸಿದ್ದಾರೆ. ರಸ್ತೆಯಲ್ಲಿನ ತಗ್ಗು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಲೊಯೆಲಾ ಶಾಲೆಯ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ.
ಸರ್ಕಾರಿ ಬಸ್‌ನ ಚಾಲಕನ ನಿರ್ಲಕ್ಷ್ಯವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಶಾಲಾ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್ಸಿನೊಳಗೆ ಮಕ್ಕಳ ಕಾಲು ತುಂಡಾಗಿ ಬಿದ್ದಿದ್ದ ಘಟನೆ ತೀವ್ರ ಭೀಕರವಾಗಿತ್ತು. ಉಳಿದಂತೆ ಸರ್ಕಾರಿ ಬಸ್ಸಿನ ಮುಂಭಾಗದ ಗಾಜು ಸಹ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ರಸ್ತೆ ಅಪಘಾತ ನಡೆದ ಸ್ಥಳದಲ್ಲಿ ನೂರಾರು ಸಾರ್ವಜನಿಕರು ಜಮಾಯಿಸಿದ್ದರು.
ಗಾಯಗೊಂಡ ಮಕ್ಕಳನ್ನು ಬಸ್ಸಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಗಾಯಗೊಂಡ ಮಕ್ಕಳನ್ನು ಸಾಗಿಸಲು ಹರಸಾಹಸ ಪಡುತ್ತಿದ್ದ ಘಟನೆ ಕಂಡು ಬಂದಿತು.
ಮಕ್ಕಳ ಬ್ಯಾಗ್‌ಗಳು ರೋಡಲೆಲ್ಲಾ ಚೆಲ್ಲಾಪಿಲ್ಲಿಯಾಗಿರುವುದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.
ಸ್ಥಳಕ್ಕೆ ರಾಯಚೂರು ಸಾರಿಗೆ ವಿಭಾಗದ ವಿಭಾಗೀಯ ಅಧಿಕಾರಿ ಚಂದ್ರಶೇಖರ್, ಡಿವೈಎಸ್ಪಿ ಶಿವಕುಮಾರ್ ಸೇರಿದಂತೆ ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತದಿಂದ ಮಕ್ಕಳಿಗಾದ ಈ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪೋಷಕರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ರಸ್ತೆಯಲ್ಲಿ ಜಮಾಯಿಸಿ ರಸ್ತೆಯ ಅವೈಜ್ಞಾನಿಕ ನಿರ್ಮಾಣಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಪರಾರಿಯಾಗಿರುವ ಬಸ್ ಚಾಲಕನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಅವರನ್ನು ಬಂಧಿಸುವವರೆಗೂ ರಸ್ತೆ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ವಿಭಾಗೀಯ ನಿಯಂತ್ರಕ ಚಂದ್ರಶೇಖರ್ ಹಾಗೂ ಡಿವೈಎಸ್ಪಿ ಶಿವಕುಮಾರ್ ಮತ್ತು ಪೊಲೀಸ್ ಸಿಬ್ಬಂದಿ ಪೋಷಕರು ಮತ್ತು ಸಾರ್ವಜನಿಕರನ್ನು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಕಿವಿಗೊಡದ ಜನತೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಖಡಾಖಂಡಿತವಾಗಿ ಅಧಿಕಾರಿಗಳಿಗೆ ಹೇಳಿದರು.
ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರು ಹಾಗೂ ಗಂಭೀರ ಗಾಯಗೊಂಡ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.
ಘಟನೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ ೫ ಲಕ್ಷ ಪರಿಹಾರ, ಹಾಗೂ ಗಂಭೀರ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ೩ ಲಕ್ಷ ಪರಿಹಾರ ಸಾರಿಗೆ ಇಲಾಖೆಯಿಂದ ಪರಿಹಾರ ಒದಗಿಸಲಾಗುವುದು. ಉಳಿದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಹೆಚ್ಚುವರಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಘಟನೆ ಕುರಿತಂತೆ ತನಿಖೆ ನಡೆಸಲಾಗುವುದು.
-ನಿತೀಶ್
ಜಿಲ್ಲಾಧಿಕಾರಿಗಳು
ಮಕ್ಕಳ ಸಾವು ನಿಜಕ್ಕೂ ದುರ್ದೈವ. ಸಾವನ್ನಪ್ಪಿರುವ ಮಕ್ಕಳ ಕುಟುಂಬಕ್ಕೆ ಪರಿಹಾರ ತಲುಪಿಸಲಾಗುವುದು. ಹೆಚ್ಚುವರಿ ಪರಿಹಾರಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಬಿಡುಗಡೆಗೆ ಮನವಿ ಮಾಡಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
-ಹಂಪಯ್ಯ ನಾಯಕ
ಶಾಸಕರು, ಮಾನವಿ
ಘಟನೆ ತೀವ್ರ ಬೇಸರ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೂಕ್ತ ತನಿಖೆಯ ನಂತರ ತಪ್ಪಿತಸ್ಥರನ್ನು ಗುರುತಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಶಾಲಾ ಬಸ್‌ಗಳ ನಿರ್ವಹಣೆ ಮತ್ತು ಸಂಚಾರ ಕುರಿತಂತೆ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು.
ಪುಟ್ಟ ಮಾದಯ್ಯ
ಪೊಲೀಸ್ ವರಿಷ್ಠಾಧಿಕಾರಿಗಳು
ಕ್ರೈಸ್ತ ಸಂಘಟನೆಯ ಪೇಜುಗಳನ್ನು ಫಾಲೋ ಮಾಡಿ: ಯೂಟ್ಯೂಬ್ | ಇನ್ಸ್ಟಾಗ್ರಮ್ | ಫೇಸ್ಬುಕ್ | ಶೇರ್ ಚಾಟ್ | ಎಕ್ಸ್ | ವಾಟ್ಸಾಪ್
ಇಂತಹ ಹೆಚ್ಚಿನ ಸುದ್ದಿಗಳಿಗೆ ನಮ್ಮ ವಾಟ್ಸಪ್ ಚಾನೆಲ್ ಫಾಲೋ ಮಾಡಿ

0 Comments