ಕಲ್ಯಾಣ ಮಂಟಪ, ಶ್ರೀರಾಮಚಂದ್ರ, ಗಡಿಬಿಡಿ ಅಳಿಯ ಸಿನಿಮಾ ನೋಡಿರುವವರಿಗೆ ನಟಿ ಮೋಹಿನಿ ನೆನಪಿರುತ್ತಾರೆ. ಈ ಚೆಲುವೆ ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಯಶಸ್ಸು ಕಂಡರೂ ಮೋಹಿನಿ, ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವುಂಡಿದ್ದಾರೆ. ಸದ್ಯಕ್ಕೆ ಅವರು ಪತಿ ಹಾಗೂ ಮಕ್ಕಳೊಂದಿಗೆ ವಿದೇಶದಲ್ಲಿ ನೆಲೆಸಿದ್ದಾರೆ.
ಚೆನ್ನೈನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಮಹಾಲಕ್ಷ್ಮಿ ಶ್ರೀನಿವಾಸನ್, ಈಗ ಮೋಹಿನಿ ಕ್ರಿಸ್ಟೀನಾ ಆಗಿ ಬದಲಾಗಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಮಹಾಲಕ್ಷ್ಮಿ ಅಲಿಯಾಸ್ ಮೋಹಿನಿ, ಕ್ರೈಸ್ತ ಧರ್ಮಕ್ಕೆ ಮತಾಂತರ(ಮಾನಸಾಂತರ)ಗೊಂಡಿದ್ದಾರೆ.
ಬಾಲ್ಯದಿಂದಲೇ ಶಾಸ್ತ್ರೀಯ ಸಂಗೀತ ಹಾಗೂ ನೃತ್ಯಾಭ್ಯಾಸದಲ್ಲಿ ತೊಡಗಿದ್ದ ಮೋಹಿನಿ 14ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು. 1991 ರಲ್ಲಿ 'ಈರಮಾನ ರೋಜಾವೇ' ಎಂಬ ತಮಿಳು ಸಿನಿಮಾ ಮೂಲಕ ಮೋಹಿನಿ ನಟನೆ ಆರಂಭಿಸಿದರು.
ಮೊದಲ ಸಿನಿಮಾದಲ್ಲಿ ಚಿತ್ರಪ್ರೇಮಿಗಳ ಮನಸ್ಸು ಗೆದ್ದ ಮೋಹಿನಿಗೆ ನಂತರ ಕನ್ನಡ, ತಮಿಳು, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಕೂಡಾ ಅವಕಾಶ ದೊರೆಯುತ್ತದೆ. ಹಿಂದಿಯ 'ಡ್ಯಾನ್ಸರ್' ಎಂಬ ಚಿತ್ರದಲ್ಲಿ ಮೋಹಿನಿ ಅಕ್ಷಯ್ ಕುಮಾರ್ ಜೊತೆ ನಟಿಸಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಜೊತೆ 'ಕಲ್ಯಾಣ ಮಂಟಪ' ಚಿತ್ರದಲ್ಲಿ ನಟಿಸುವ ಮೂಲಕ ಮೋಹಿನಿ, ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ 1992ರಲ್ಲಿ ತೆರೆ ಕಂಡಿತ್ತು.
ಇದಾದ ನಂತರ ಶ್ರೀರಾಮಚಂದ್ರ, ಜ್ವಾಲಾ, ಸಿಡಿದೆದ್ದ ಪಾಂಡವರು, ರೌಡಿ, ಗಡಿಬಿಡಿ ಅಳಿಯ, ಲಾಲಿ, ನಿಶ್ಯಬ್ಧ ಸಿನಿಮಾಗಳಲ್ಲಿ ಮೋಹಿನಿ ನಟಿಸಿದರು. ಅದರಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದ ಶ್ರೀರಾಮಚಂದ್ರ, ಡಾ. ವಿಷ್ಣುವರ್ಧನ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದ ಲಾಲಿ ಸಿನಿಮಾ ಅವರಿಗೆ ಒಳ್ಳೆ ಹೆಸರು ತಂದು ನೀಡಿತು.
ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಮೋಹಿನಿ 1999ರಲ್ಲಿ ಭರತ್ ಕೃಷ್ಣಸ್ವಾಮಿ ಎಂಬುವರನ್ನು ಮದುವೆಯಾಗಿ ಅಮೆರಿಕ ತೆರಳುತ್ತಾರೆ. ಮದುವೆ ನಂತರ 5 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ ಮೋಹಿನಿ ನಂತರ 2004ರಲ್ಲಿ ಮತ್ತೆ ನಟನೆ ಆರಂಭಿಸುತ್ತಾರೆ.
2004 ರಿಂದ ಸುಮಾರು 7 ವರ್ಷಗಳ ಕಾಲ ಮೋಹಿನಿ ಕೆಲವೊಂದು ಸಿನಿಮಾಗಳಲ್ಲಿ ನಟಿಸಿ ಮತ್ತೆ ಚಿತ್ರರಂಗದಿಂದ ದೂರಾಗುತ್ತಾರೆ. 2011ರಲ್ಲಿ ಮಲಯಾಳಂನ 'ಕಲೆಕ್ಟರ್' ನಂತರ ಮೋಹಿನಿ ಬೇರೆ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ.
ಮದುವೆ ಆದ ನಂತರದಿಂದ ಸಿನಿಮಾಗೆ ವಿದಾಯ ಹೇಳಿದ್ದರ ನಡುವೆ, ಮೋಹಿನಿ ಪತಿಯ ಮನೆಯವರಿಂದ ಸಾಕಷ್ಟು ಕಿರುಕುಳ ಅನುಭವಿಸುತ್ತಾರೆ. ಕೆಲವೊಂದು ಇಂಟರ್‌ವ್ಯೂಗಳಲ್ಲಿ ಮೋಹಿನಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಮೊದಲ ಮಗ ಜನಿಸಿದ ನಂತರ ನನಗೆ ಅನಾರೋಗ್ಯ ಕಾಡಲು ಶುರು ಆಯ್ತು. ಎಲ್ಲಿ ಚಿಕಿತ್ಸೆ ಪಡೆದರೂ ಎಷ್ಟೇ ಕಾಳಜಿ ವಹಿಸಿದರೂ ಆರೋಗ್ಯ ಸಮಸ್ಯೆ ಹೆಚ್ಚಾಯ್ತೇ ಹೊರತು ಕಡಿಮೆ ಆಗಲಿಲ್ಲ. ಇದೇ ವೇಳೆ ಪತಿ ಹಾಗೂ ಮನೆಯವರು ನನ್ನನ್ನು ನಿಂದಿಸಲು ಆರಂಭಿಸುತ್ತಾರೆ. ವಿಚ್ಛೇದನ ನೀಡಿ ಎರಡನೇ ಮದುವೆ ಆಗಲು ಭರತ್ ಕೂಡಾ ನಿರ್ಧರಿಸಿದ್ದರು.
ಈ ಸಮಸ್ಯೆಯಿಂದ ಹೇಗಾದರೂ ಪಾರಾಗಬೇಕೆಂದು ನಾನು ಧ್ಯಾನದ ಮೊರೆ ಹೋದೆ. ಅದೇ ಸಮಯದಲ್ಲಿ ಆಪ್ತರೊಬ್ಬರು ನನಗೆ ಕ್ರೈಸ್ತ ಧರ್ಮದ ಬಗ್ಗೆ ಹೇಳುತ್ತಾರೆ. ಅದರ ಮೇಲೆ ನಂಬಿಕೆ ಇಟ್ಟು ಚರ್ಚ್‌ಗಳಿಗೆ ತೆರಳಿ ಪ್ರಯರ್ ಮಾಡಲು ಆರಂಭಿಸಿದೆ.
ಅದೇ ಸಮಯಕ್ಕೆ ನನ್ನ ಆರೋಗ್ಯ ಸಮಸ್ಯೆ ಕೂಡಾ ಕಡಿಮೆ ಆಗಿದ್ದೂ ಅಲ್ಲದೆ ಪತಿ, ಮನೆಯವರು ಮೊದಲಿನಂತೆ ಪ್ರೀತಿಯಿಂದ ಕಾಣಲು ಆರಂಭಿಸಿದ್ದರಿಂದ ನಾವೆಲ್ಲರೂ ಕ್ರೈಸ್ತ ಧರ್ಮಕ್ಕೆ ಮತಾಂತರ(ಮಾನಸಾಂತರ)ಗೊಂಡಿದ್ದಾಗಿ ಮೋಹಿನಿ ಹೇಳಿಕೊಂಡಿದ್ದಾರೆ.
ಸದ್ಯಕ್ಕೆ ಮೋಹಿನಿ, ಕುಟುಂಬದೊಂದಿಗೆ ಸಂತೋಷದಿಂದ ಇದ್ದಾರೆ. ಜೊತೆಗೆ ಅಮೆರಿಕದ ವಾಷಿಂಗ್ಟನ್‌ನ ಚರ್ಚ್‌ವೊಂದರಲ್ಲಿ ಧರ್ಮ ಪ್ರವಚನೆ ಮಾಡುತ್ತಿದ್ದಾರೆ. ತಮ್ಮಂತೆ ಮಾನಸಿಕ ಹಾಗೂ ದೈಹಿಕವಾಗಿ ನೋವು ಅನುಭವಿಸಿದವರಿಗಾಗಿ ಅವರು ಪ್ರಾರ್ಥನೆ ಮಾಡುತ್ತಿದ್ದಾರಂತೆ.
Content Credit: kannadahindustantimes
ಇಂತಹ ಹೆಚ್ಚಿನ ಸುದ್ದಿಗಳಿಗೆ ನಮ್ಮ ವಾಟ್ಸಪ್ ಚಾನೆಲ್ ಫಾಲೋ ಮಾಡಿ
ನೀವು ಕೂಡ ಕ್ರೈಸ್ತ ಸಮುದಾಯಕ್ಕೆ ಸಂಬಂಧಪಟ್ಟ ಉತ್ತಮ್ಮ ಆರ್ಟಿಕಲ್ಸ್ ಬರೆಯುವುದಾದರೆ ಇಲ್ಲಿ ಕ್ಲಿಕ್ ಮಾಡಿ













0 Comments