ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ಕ್ರೈಸ್ತ ಸಂಘಟನೆ ಬೆಂಬಲ

 ಕರ್ನಾಟಕ ಸಂಘಟನೆಗಳ ಕನ್ನಡ ಒಕ್ಕೂಟದ ವತಿಯಿಂದ ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹಕ್ಕೆ ಕರ್ನಾಟಕ ಕ್ರೈಸ್ತ ಸಂಘಟನೆ ರಾಜ್ಯದ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು ಬೆಂಬಲ ನೀಡಿದರು

ಮೇಕೆದಾಟು ಯೋಜನೆ ವಿವಾದ ಏಕೆ, ಏನು?
ಮೇಕೆದಾಟು ಬಳಿ ಕರ್ನಾಟಕ ನಿರ್ಮಿಸಲು ಹೊರಟಿರುವ ಅಣೆಕಟ್ಟು ವಿವಾದಕ್ಕೆ ಕಾರಣವಾಗಿದೆ. ಕಾವೇರಿಕೊಳ್ಳದಲ್ಲಿ ಕಾಮಗಾರಿ ಕೈಗೊಂಡು ಕರ್ನಾಟಕ ಕಾವೇರಿ ಐ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ತಮಿಳುನಾಡು ದೂರಿದ್ದು, ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ತಮಿಳುನಾಡಿಗೆ ಹರಿಯುವ ನೀರಿನಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಕರ್ನಾಟಕ ಸ್ಪಷ್ಟನೆ ಕೊಟ್ಟಿದೆ.

2013ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ಮೊದಲು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿತು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ, ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಯೋಜನೆ ಮುಖ್ಯ ಉದ್ದೇಶವಾಗಿತ್ತು.

ಮೇಕೆದಾಟುವಿನಲ್ಲಿ 22 ಕಡೆ ಅಣೆಕಟ್ಟು ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿದೆ. ಈ ಯೋಜನೆಯು ಪೂರ್ಣಗೊಂಡಲ್ಲಿ ಸುಮಾರು 48 ಟಿಎಂಸಿ ನೀರು ಸಂಗ್ರಹಣೆ ಮಾಡಬಹುದಾಗಿದೆ. ಕರ್ನಾಟಕವಿನ್ನೂ ಯೋಜನೆ ಪ್ರಸ್ತಾವನೆ ಮುಂದಿಟ್ಟಿದ್ದು, ಯೋಜನಾ ವರದಿ ತಯಾರಿಸಿ ಕೇಂದ್ರ ಜಲಮಂಡಳಿ ಯೋಜನಾ ಸಮಿತಿಗೆ ಕಳುಹಿಸಿಕೊಟ್ಟು, ಅಲ್ಲಿ ಒಪ್ಪಿಗೆ ಸಿಕ್ಕ ನಂತರ ಯೋಜನೆ ಆರಂಭವಾಗಲಿದೆ. ಕಾವೇರಿ ಕ್ಯಾತೆ ಆರಂಭ : 2013ರ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ಅವರು ಮೇಕೆದಾಟುವಿನ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಕಾವೇರಿ ಜಲಾನಯದ ಪ್ರದೇಶದಲ್ಲಿ ಅಣೆಕಟ್ಟು ಕಟ್ಟುವ ಮೂಲಕ ಕರ್ನಾಟಕ ಕಾವೇರಿ ಐ ತೀರ್ಪನ್ನು ಉಲ್ಲಂಘಿಸುತ್ತಿದೆ, ಇದಕ್ಕೆ ಅವಕಾಶ ನೀಡಬಾರದು ಎಂದು ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಎರಡೂ ರಾಜ್ಯಗಳ ಅನುಮತಿ ಪಡೆಯಬೇಕು. ಆದರೆ, ಕರ್ನಾಟಕ ತಮಿಳುನಾಡಿಗೆ ಯಾವುದೇ ಮಾಹಿತಿ ನೀಡದೆ ಮೇಕೆದಾಟು ಯೋಜನೆ ಆರಂಭಿಸುತ್ತಿದೆ ಎಂದು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. [ಜಯಲಲಿತಾ ವಿರೋಧ]


ಕರ್ನಾಟಕದ ಸ್ಪಷ್ಟನೆಗಳು : ಮೇಕೆದಾಟು ಯೋಜನೆ ಬಗ್ಗೆ 2014ರ ಏಪ್ರಿಲ್‌ನಲ್ಲಿ ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದ್ದು, ಕಾವೇರಿ ನ್ಯಾಯಮಂಡಳಿ ತೀರ್ಪಿನ ಪುಟ ಸಂಖ್ಯೆ 13 ಹಾಗೂ ಷೆಡ್ಯೂಲ್‌ 9 ರಲ್ಲಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ತಿಂಗಳು ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕು ಎಂದು ತಿಳಿಸಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಿ, ಯೋಜನೆಗೆ ಬಳಸಿಕೊಳ್ಳಲಾಗುವುದು. ಇದರಿಂದಾಗಿ ಕಾವೇರಿ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿತು. [ಕರ್ನಾಟಕದ ಸ್ಪಷ್ಟನೆಗಳು]
ಮೇಕೆ ದಾಟು

ಮೇಕೆದಾಟು - ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ದಟ್ಟವಾದ ಅರಣ್ಯದ ನಡುವೆ ಕಾವೇರಿ ನದೀ ಪಾತ್ರದಲ್ಲಿರುವ ಒಂದು ಪ್ರೇಕ್ಷಣೀಯ ವಿಹಾರಸ್ಥಳ, ಬೆಂಗಳೂರಿನಿಂದ ೯೦ ಕಿ. ಮೀ. ದೂರದಲ್ಲಿದೆ. ಬೆಂಗಳೂರಿನ ದಕ್ಷಿಣಕ್ಕೆ ಸಾತನೂರು ಮಾರ್ಗವಾಗಿ 113 ಕಿಮೀ. ಕನಕಪುರದಿಂದ ಸಾತನೂರು, ಆಲಹಳ್ಳಿ, ಉಯ್ಯಂಬಳ್ಳಿಗಳ ಮಾರ್ಗವಾಗಿ ದಕ್ಷಿಣದಲ್ಲಿ ಸುಮಾರು 40 ಕಿಮೀ ದೂರದಲ್ಲಿದೆ.

ಕನ್ನಡ ಭಾಷೆಯಲ್ಲಿ ಅದರ ಅರ್ಥ ಮೇಕೆ ಹಾರುವಷ್ಟು ಸ್ಥಳ. ಇಲ್ಲಿ ಕಾವೇರಿನದಿ, ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿದಾಟುವಷ್ಟು ಜಾಗಮಾತ್ರ.

ಕಾವೇರಿ-ಅರ್ಕಾವತಿ ನದಿಯ ಸಂಗಮದ ಹತ್ತಿರದ ವರೆಗೆ ಕಾರ್-ಡ್ರೈವ್ ಮಾಡಿಹೋಗಬಹುದು. ಇದರ ನಂತರ, ನದಿಯನ್ನು 'ತೆಪ್ಪ,' ದಲ್ಲಿ ದಾಟಬಹುದು. ನೀರು ಆಳವಿಲ್ಲದಿದ್ದರೆ ನಡೆದೇ ಹೋಗಬಹುದು. ಇಲ್ಲಿಂದ ಮೇಕೆದಾಟು ೪ ಕಿ. ಮೀ ದೂರವಿದೆ. ಮೇಕೆದಾಟು ನ ವರೆಗೆ, ಹೋಗಲು ಕೇವಲ ೧ ಬಸ್ ಇದೆ. 'ಮಾನ್ಸೂನ್,' ಸಮಯದಲ್ಲಿ ಅಲ್ಲಿನ ಬಂಡೆಗಳಮೇಲೆ ಹತ್ತಲು ಬಹಳ ಕಷ್ಟ. ಜಾರುತ್ತವೆ. ಮತ್ತೊಂದು ಫಾಲ್ಸ್ 'ಚುಂಚಿ ಜಲಪಾತ,' ಹತ್ತಿರದಲ್ಲಿದೆ. ಸಂಗಮದ ಹತ್ತಿರದಿಂದ ಸ್ವಲ್ಪ ಬೇರೆದಿಕ್ಕಿಗೆ, ಹೋಗಬೇಕು.

ಪ್ರವಾಸೀ ಆಕರ್ಷಣೆ

ಕನಕಪುರದ ಮಾರ್ಗವಾಗಿ ಅರ್ಕಾವತಿ ನದಿ ಸುಮಾರು 32 ಕಿಮೀ ಮೈದಾನ ಪ್ರದೇಶದಲ್ಲಿ ಹರಿದು ಕಡೆಗೆ ತಾಲ್ಲೂಕಿನ ದಕ್ಷಿಣದ ಪ್ರದೇಶವಾದ ಅರಣ್ಯವನ್ನು ಹೊಕ್ಕು ಕಾವೇರಿಯನ್ನು ಸಂಗಮ ಎನ್ನುವೆಡೆ ಸೇರುತ್ತದೆ. ಅಲ್ಲಿ ಸಂಗಮೇಶ್ವರನ ದೇವಾಲಯ ಮತ್ತು ಒಂದು ಪ್ರವಾಸಿ ಮಂದಿರ ಇವೆ. ಇಲ್ಲಿಂದ ಅರ್ಕಾವತಿಯನ್ನು ದಾಟಿ ಕಾವೇರಿಯ ಎಡ ದಂಡೆಯ ಮೇಲೆ ಸುಮಾರು 5 ಕಿಮೀ ದೂರದಲ್ಲಿ ಮೇಕೆದಾಟು ಸಿಕ್ಕುತ್ತದೆ. ಪ್ರವಾಸಿಗರಿಗೆ ಮುಖ್ಯ ಆಕರ್ಷಣೀಯ ಕೇಂದ್ರ ಮೇಕೆದಾಟು ಎಂದು ಪ್ರಸಿದ್ಧವಾಗಿದ್ದರೂ ಆ ಆಕರ್ಷಣೀಯ ಪೂರ್ವ ಸಿದ್ಧತೆ ಸಂಗಮದಿಂದಲೇ ಆರಂಭವಾಗುತ್ತದೆ. ಅರ್ಕಾವತಿಯಿಂದ ಕಾವೇರಿ ದಟ್ಟವಾದ ಅರಣ್ಯದ ನಡುವೆ ಮುಂದೆ ಪ್ರವಹಿಸಿದಂತೆ ಅದರ ಪಾತ್ರ ಕ್ರಮಕ್ರಮವಾಗಿ ಕಿರಿದಾಗುತ್ತ ಬರುತ್ತದೆ. ಅಲ್ಲಿಂದ ಇಳಿಜಾರು ಹೆಚ್ಚುತ್ತ ಹೋಗುವುದರಿಂದ ನೀರಿನ ಪ್ರವಾಹ ಭೀರ್ಗರೆಯುತ್ತ ವನಾಂತರ ಪ್ರದೇಶವೆಲ್ಲ ಗಂಭೀರ ಸ್ವರದಿಂದ ತುಂಬಿರುತ್ತದೆ. ಶತಮಾನಗಳ ಪ್ರವಾಹದ ಹೊಡೆತಕ್ಕೆ ಸಿಕ್ಕಿದ ಇಕ್ಕೆಲಗಳ ಬೆಟ್ಟಗಳ ಬಂಡೆಗಳು, ಚಿತ್ರ ವಿಚಿತ್ರವಾಗಿ ಕೊರೆದು ಹೋಗಿ ನಿಸರ್ಗ ನಿರ್ಮಿಸಿರುವ ಮಹೋನ್ನತ ಶಿಲ್ಪಕಲಾ ಕೃತಿಗಳಿಂದ ಕಂಗೊಳಿಸುತ್ತಿರುತ್ತವೆ. ಪಾತಾಳದಲ್ಲಿ ಡುಮಡುಮನೆ ಇಳಿದೋಡುತ್ತಿರುವ ನದಿಯ ಎತ್ತರವಾದ ಎರಡು ಪಾಶ್ರ್ವಗಳಲ್ಲೂ ಮರಗಳ ಸಾಲಿನ ಹಸುರಿನ ಸಾಂದ್ರತೆ ಪ್ರಪಾತದ ಪ್ರವಾಹದ ಮೇಲೆ ಕತ್ತಲು ಗರೆಯುತ್ತ ಅದರ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇಂಥ ಗಂಭೀರತೆಯ ನಡುವೆ ಮುಂದೆ ಪ್ರವಹಿಸಿದಂತೆ ನದಿಯ ಪಾತ್ರ ತೀರ ಇಕ್ಕಟ್ಟಾಗುತ್ತ ಬಂದು ಕೊನೆಗೆ ಮೇಕೆದಾಟನ್ನು ಸೇರುತ್ತದೆ. ಇಲ್ಲಿ ನದಿಯ ಪಾತ್ರ ಮೇಕೆ ದಾಟಬಲ್ಲಷ್ಟು ಕಿರಿದಾಗಿದೆ ಎಂದು ಉತ್ಪ್ರೇಕ್ಷೆಯಿಂದ ಹೇಳುವಷ್ಟು ಕಿರಿದಾಗಿದೆ ಎಂದೇ ಇಲ್ಲಿಗೆ ಮೇಕೆದಾಟು ಎಂಬ ಹೆಸರು. ನದಿಯ ಎಡದಡದಲ್ಲಿ ಧುಮ್ಮಿಕ್ಕುವ ನೀರಿಗೆ ಸೋಂಕುವಂತೆ ಪಕ್ಕದಲ್ಲಿ ಅಗಲವಾದ ಚಪ್ಪಟೆ ಬಂಡೆಕಲ್ಲೊಂದಿದೆ. ಇದಕ್ಕೆ ಟೇಬಲ್‍ರಾಕ್ ಎಂದು ಹೆಸರು. ಪ್ರವಾಸಿಗರು ಇದರ ಮೇಲೆ ನಿಂತು ನಿಸರ್ಗದ ರಮ್ಯ ಸೊಬಗನ್ನು ವೀಕ್ಷಿಸುವುದು ವಾಡಿಕೆ. ನದಿ ಮುಂದಕ್ಕೆ ಪ್ರವಹಿಸಿದಂತೆ ಅದರ ಪಾತ್ರ ವಿಸ್ತರಿಸುತ್ತ ಹೋಗುತ್ತದೆ. ಜಲರಾಶಿ ಹರಡಿಕೊಂಡು ಹೆಚ್ಚು ಇಳಿ ಜಾರಿಲ್ಲದ ಬಯಲಿನಲ್ಲಿ ನಿಧಾನವಾಗಿ ಮುಂದೆ ಸಾಗುತ್ತ ಕೊಳ್ಳೇಗಾಲ ತಾಲ್ಲೂಕಿನ ಪೂರ್ವ ಮತ್ತು ದಕ್ಷಿಣದ ಗಡಿಗಳನ್ನೂ ಆವರಿಸಿದಂತೆ ಹರಿದು ತಮಿಳುನಾಡನ್ನು ಸೇರುತ್ತದೆ.

Post a Comment

0 Comments